ಅಚ್ಚು

 ರಸ್ತೆ ವಾಹನ ಅಥವಾ ರೈಲುಬಂಡಿಯ ಒಂದು ಜೊತೆ ಚಕ್ರಗಳನ್ನು ಕೂಡಿಸುವ ಮರದ ಅಥವಾ ಲೋಹದ ತೊಲೆ ಅಥವಾ ಸರಳಿಗೆ ಅಚ್ಚು (ಆ್ಯಕ್ಸಿಲ್) ಎನ್ನುತ್ತಾರೆ. ಇದರ ಮೂಲಕ ಬಂಡಿಯ ತೂಕ ಚಕ್ರಕ್ಕೆ ಒಯ್ಯಲ್ಪಡುತ್ತದೆಯಲ್ಲದೆ ಚಕ್ರಗಳೂ ಒಂದೇ ಅಂತರದಲ್ಲಿ ನಿಂತಿರುತ್ತವೆ. ಅಚ್ಚು ಸ್ಥಿರವಾಗಿದ್ದು ಅದರ ತುದಿಗಳಲ್ಲಿ ಚಕ್ರ ಸುತ್ತುತ್ತಿರಬಹುದು ಅಥವಾ ಚಕ್ರಗಳು ಅಚ್ಚಿಗೇ ಬಂಧಿಸಲ್ಪಟ್ಟು ಇಡೀ ಅಚ್ಚೇ ಧಾರಕದ (ಬೇರಿಂಗ್ಸ್) ಮೇಲೆ ತಿರುಗಬಹುದು. ರಸ್ತೆ ಬಂಡಿಗಳಲ್ಲಿ ನಡುವಿನ ಸ್ಥಿರ ಭಾಗವನ್ನು ಇರಚು ಎಂದೂ ತುದಿಗಳನ್ನು ಅಚ್ಚು ಎಂದೂ ಕರೆಯುತ್ತಾರೆ. ಚಕ್ರ ಆಚೆಗೆ ಹೊರಳದಂತೆ ತಡೆಯಲು ಕಡಾಣಿಗಳಿರುತ್ತವೆ. ರೈಲು ಎಂಜಿನ್ನು, ಬಂಡಿ ಮತ್ತು ಕ್ರೇನು ಇಂಥವುಗಳಲ್ಲಿ ಅಚ್ಚು ಬೇರಿಂಗುಗಳೊಳಗೆ ಸುತ್ತುತ್ತಿದ್ದು, ಬೇರಿಂಗಿನೊಳಗಿನ ಅಚ್ಚಿನ ಅಷ್ಟು ಭಾಗವನ್ನು ಜರ್ನಲ್ ಎಂದು ಕರೆಯುಲಾಗುತ್ತದೆ (ನೋಡಿ- ಅಚ್ಚಿನಧಾರಕ). ರೈಲು ಎಂಜಿನ್ನಿನಲ್ಲಿ ಅಚ್ಚನ್ನು ತಿರುಗಿಸುವ ಕೂಡುಸರಳಿಗೆ ಹೊರಭಾಗದಲ್ಲಿ ಜಾಗವಿರಬೇಕಾದ್ದರಿಂದ ಬೇರಿಂಗುಗಳು ಚಕ್ರಗಳ ನಡುವೆ ಇರುತ್ತವೆ; ಆದರೆ ಬಂಡಿಗಳಲ್ಲಿ ಬೇರಿಂಗುಗಳು ಚಕ್ರಗಳ ಹೊರಗಡೆ ಇರುತ್ತವೆ.

 ಅಚ್ಚು ಎಂಜಿನ್ನಿನಿಂದ ತಿರುಗಿಸಲ್ಪಡುವ ಸನ್ನಿವೇಶದಲ್ಲಿ ರೈಲು ಎಂಜಿನ್ನಿನಲ್ಲಿನಂತೆ ಸೀದಾ ಕೂಡುಸರಳಿನಿಂದ ಆಗಬಹುದು ಅಥವಾ ಮೋಟಾರು ಗಾಡಿಗಳಂತೆ ಹಲ್ಲು ಚಕ್ರಗಳ ಸರಣಿಯ (ಗಿಯರ್ ಮಾಲೆ) ಮೂಲಕವಿರಬಹುದು. ಮೋಟಾರ್ ಬಂಡಿಯ ಅಚ್ಚುಗಳಲ್ಲಿ ಮುಂಚೆ ಎರಡು ರೀತಿಯವಿರುತ್ತಿದ್ದುವು. 1. ಎಂಜಿನ್ನಿನಿಂದ ಚಾಲಿತವಾದ ಹಿಂಬದಿಯ ಅಚ್ಚು; ಇದು ನಡುವೆ ಡಿಫರೆನ್ಷಿಯಲ್ ಗಿಯರ್ ಉಳ್ಳ ಎರಡು ಭಾಗಗಳಾಗಿದ್ದು ಒಂದೊಂದೂ ಒಂದೊಂದು ಕೊಳವೆಯ ಅಥವಾ ಬೆಂಬಲಿಗ ಅಚ್ಚಿನ ಒಳಗೆ ಇರುವುದು. 2. ಮುಂಬದಿಯ ಅಚ್ಚು: ಸ್ಥಿರವಾದ ಸರಳಾಗಿದ್ದು ಅದರ ತುದಿಗಳಲ್ಲಿ ತುಂಡು ಅಚ್ಚುಗಳು ತಿರುಗಾಣಿಯಾಗಿರುತ್ತಿದ್ದುವು. ಈಚೀಚೆಗೆ ತಯಾರಕರು ಈ ಮುಂಬದಿಯ ಸರಳು ಅಚ್ಚನ್ನು ಕೈಬಿಟ್ಟು ಅದರ ಬದಲು ಮುಂದಿನ ಎರಡು ಚಕ್ರಗಳನ್ನು ಬಂಡಿಯ ಚೌಕಟ್ಟಿಗೇ ಪ್ರತ್ಯೇಕವಾಗಿ ಕೂಡಿಸುವ ಏರ್ಪಾಡು ಮಾಡಿರುತ್ತಾರೆ.

 ಮೋಟಾರಿನ ಮತ್ತು ಇತರ ಇಂಥ ಅಚ್ಚುಗಳಿಗೆ ಸಾದಾ ಬೇರಿಂಗುಗಳ ಬದಲು ಬಾಲ್ ಮತ್ತು ರೋಲರ್ ಬೇರಿಂಗುಗಳು ಉಪಯೋಗಿಸಲ್ಪಡುತ್ತಿದ್ದರೆ, ರೈಲುಬಂಡಿಗಳಲ್ಲಿ ರೋಲರ್ ಬೇರಿಂಗುಗಳನ್ನು ಕೆಲವು ಕಡೆ ಬಳಸಿದ್ದರು ಹೆಚ್ಚಾಗಿ ಸಾದಾ ಅಕ್ಷಪುಟವೇ (ಆ್ಯಕ್ಸಿಲ್ ಬಾಕ್ಸ್) ಇನ್ನೂ ಬಳಕೆಯಲ್ಲಿದೆ. ಇಲ್ಲಿ ಅಚ್ಚಿನ ಮೇಲರ್ಧಕ್ಕೆ ಮಾತ್ರ ಬೇರಿಂಗ್ ತಲ ಸಾಮಾನ್ಯವಾಗಿ ಫಿರಂಗಿ ಲೋಹದ್ದಿದ್ದು ಅದಕ್ಕೆ ಬಿಳಿ ಮಿಶ್ರಲೋಹದ ಕವಚ ಎರಕವಾಗಿರುತ್ತದೆ. ಗ್ರೀಸ್ ಅಥವಾ ಎಣ್ಣೆಯ ಮೃದು ಚಾಲಕ ಇಲ್ಲಿ ಧಾರಾಳವಾಗಿ ಸರಬರಾಜಾಗುವಂತೆ ರಚನೆಯಿರಬೇಕು.

 ರೈಲುಬಂಡಿಯ ಅಚ್ಚು ಏನಾದರೂ ಮುರಿದುಹೋದರೆ ಆಗುವ ಅಗಾಧ ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮ ದರ್ಜೆಯ ಹಾಗೂ ಅದರ ವಿಶಿಷ್ಟ ಗುಣಗಳಿಗಾಗಿ ತೀವ್ರ ಪರೀಕ್ಷೆಗೊಳಗಾದ ಮಿಶ್ರ ಉಕ್ಕಿನಿಂದಲೇ ಇದನ್ನು ಮಾಡಲಾಗುತ್ತದೆ. ರೈಲುಗಾಡಿಗಳಿಗೆ ಅಗತ್ಯವಾದ ಅಚ್ಚುಗಳ ಅಪಾರ ಸಂಖ್ಯೆಯ ಗಣನೆಯಿಂದಾಗಿ, ಅವುಗಳ ಎರಡೂ ಕಡೆಯ ಜರ್ನಲುಗಳನ್ನು ಒಂದೇ ಸಮನಾಗಿ ಏಕಕಾಲದಲ್ಲಿ ಸುತ್ತಿಸುವುದಕ್ಕೆ ವಿಶೇಷ ರಚನೆಯ ಲೇತ್‍ಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ ಅಡಸು ಮಾಡಿದ ಉಕ್ಕಿನ ಸುತ್ತು ಕವಚವನ್ನು ವಿಶೇಷ ಬಲಪ್ರಯೋಗದಿಂದ ತಿರುಗುವ ಜರ್ನಲುಗಳಿಗೆ ಒತ್ತಿ ಬಿಗಿಯುವುದರಿಂದ, ಉಜ್ಜಿ ಮೆರಗುಕೊಟ್ಟ ಮತ್ತು ಹೆಚ್ಚು ಸವೆತ ನಿರೋಧಿಯಾದ ಮೇಲ್ಮೈ ಇರುವಂತೆ ಮಾಡಲಾಗುತ್ತದೆ.

(ಕೆ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ